ಹಸಿವಿನ ಯಾತ್ರೆ (Kannada Kavana)



ಮುಂಜಾನೆಯ ನೇಸರನು ಬಾಚಿತಬ್ಬಿಕೊಳ್ಳಲು
ಜಗವೆಲ್ಲ ನಮಿಸಲು ಇನ್ನೊಂದು ಬೆಳಕಿಗೆ
ನೊಂದು ಬೆಂದಳು ಆಕೆ ಮತ್ತೊಂದು ಹಗಲಿಗೆ ;
ಸವೆದ ಚಪ್ಪಲಿ, ಹರಿದ ಸೆರಗು -
ಕಣ್ಣಂಚಿನಲಿ ಆಸೆ-ಆಕಾಂಕ್ಷೆಯ ಛಾಯೆ
ಭರವಸೆಯ ಬೆಳಕಿನೊಂದಿಗೆ ಹೊರಟಿತು ಪಯಣ !

ಬದುಕೆಂಬ ಯಾತ್ರೆಗೆ ಹಸಿವೆಂಬ ಶಾಪ ;
ಮೊಕ್ಷವೆಲ್ಲಿದೆ ಬಾಳತುಂಬ ನಿಶೆಯು ಆವರಿಸಲು?
ನಗುವ ತಂದ ಕಂದನ ನಗುವ ನೋಡುವ ತವಕ
ಮಗುವಿನ ನಗುವಿನೊಂದಿಗೆ ಹೊರಟಿತು ಹಸಿವಿನ ಪಯಣ !

ಕೈ ಒಡ್ಡಿದವು ಬೆರಳುಗಲು ಹಸಿವನೀಗಿಸಲು
ಅಸ್ಪ್ರಶ್ಯವೆಂಬ ಪಾಷಾಣ ನುಂಗಿ ಕುಡಿಯಿತು ಮಗದೊಮ್ಮೆ!
ಮತ್ತದೆ ರಣಕೇಕೆ ಬಗೆದವು ಆಕೆಯ ಒಡಲು
ಅವಮಾನದ ಬೆಂಕಿಯೊಂದಿಗೆ ಹೊರತಿತು ಹಸಿವಿನ  ಪಯಣ !

ಹೆಜ್ಜೆ ಉರುಳಿದವು ಬಹುದೂರದವರೆಗೆ
ಕತ್ತಲ ಹಾದಿಯಲಿ ಬೆಳಕಿನ ಕಡೆಗೆ;
ಹತಾಶೆಯ ನೆರಳು ಮಗದೊಮ್ಮೆ ಆವರಿಸಲು
ನಿರಾಶೆಯ ಬುತ್ತಿಯೊಂದಿಗೆ ಹೊರಟಿತು ಹಸಿವಿನ  ಪಯಣ !

ಮರಳಿತು ಗೂಡಿಗೆ ಕಂದನ ತೊಟ್ಟಿಲೆಡೆಗೆ
ಮತ್ತದೇ ಕೊಚ್ಚಲಿನ ಪಾನೀಯ ಕೂಸಿನ ಉದರಕ್ಕೆ!
ರಾತ್ರಿಯು ಬಾಚಲು ಅಕ್ಷಿಪಟಲವು ಮಲಗಲು
ಮುಂಜಾನೆಯ ಸೂರ್ಯನು ಮತ್ತೊಂಮ್ಮೆ ನಸುನಗಲು
ಭರವಸೆಯ ಬೆಳಕಿನೊಂದಿಗೆ ಹೊರಟಿತು ತಾಯಿಯ ಪಯಣ
ಮತ್ತದೇ ಗುರಿಯೊಂದಿಗೆ ಕಂದನ ನಗುವೊಂದಿಗೆ !!


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಚಿಂತನೆ